ಹಚ್ಚಿಟ್ಟ ಹಣತೆಯನ್ನು ನಮ್ಮೀ
ಬಿಸಿಯುಸಿರಿನಲ್ಲಿ ನಂದಿಸೋಣ
ಆಸೆಯ ಅಲೆಗಳು ದಣಿಯುವವರೆಗೂ
ಹಗಲಾಗದಂತೆ ಮಂಚದ ಕಾಲಿಗೆ
ನೇಸರನನ್ನು ಬಿಚ್ಚಿಟ್ಟ ಅಂಗಿಯಲ್ಲಿ
ಬಿಗಿದು ಬಂಧಿಸೋಣ!
ಮುತ್ತಿನ ಎಣಿಕೆಯನ್ನು
ಗಡಿಯಾರದ ಮುಳ್ಳು ಲೆಕ್ಕವಿಡಲಿ
ದೇಹಕ್ಕೆ ಅಂಟಿಕೊಂಡ
ಹಾಸಿಗೆಯ ಹತ್ತಿ
ಹೊಸದೊಂದು ವಿನ್ಯಾಸವನ್ನು ಮೂಡಿಸಲಿ
ಜಾತ್ರೆಯಲ್ಲಿ ಕಳೆದು ಹೋದ
ಮಗುವಿನ ಹಾಗೆ ಈ ಕತ್ತಲೊಳಗೆ ಕರಗೋಣ.
ಮುಂಜಾನೆ ಸೂರ್ಯನ ಕಿರಣ
ಕೆನ್ನೆಗೆ ಮುತ್ತಿಡುವ ವೇಳೆ
ಕಳಚಿ ಎಸೆದ ನಾಗರಿಕತೆಯ ಹುಡುಕೋಣ!
No comments:
Post a Comment