ನೀನೆ ನನಗಾಗ ಆರಂಭ, ಅದೀಗ ಬರೀ ಆಕರ್ಷಣೆ
ಎನ್ನುವ ಅರಿವಾಗಿದೆ,
ಆದರೂ ಸಾಹಿತ್ಯದ ಸುಗ್ಗಿಯಲ್ಲಿ
ಕಲಿತ ಮಗ್ಗಿಯನ್ನು ಮರೆಯುವುದು
ತಪ್ಪಲ್ಲವೆ, ಹಾಗೆ ಈಗ ನನ್ನದೇ ನೆನಪಿನ
ಸಾಗರದಲ್ಲಿ ನಿನಗಾಗಿ ಒಂದು ಹನಿ ಎತ್ತಿಡುವ ಗಳಿಗೆ,
ನಾಸ್ತಿಕನಾದರೂ ಮುಂಜಾನೆಯೆ ಎದ್ದು
ಗುಡಿಗೆ ಹೋಗುವ ನಿನ್ನನ್ನು ಕಾಣಲು
ದೂರದಲ್ಲಿ ನಿಂತು ನಾನೇ ನಿರ್ಮಿಸಿಕೊಂಡ
ಗಡಿಯೊಳಗೆ ಕಾಯುತ್ತಿದ್ದೆ,
ನಿನ್ನೊಂದಿಗೆ ಮಾತಾಡಿ ಬೀಗಲು
ಅಂಗ್ಲವನ್ನು ಅರ್ಧ ಕಲಿತು ಬರುತ್ತಿದ್ದೆ,
ಕಾಗುಣಿತ ತಪ್ಪಿರುವ ಪ್ರಾಸ ತುಂಬಿದ ಪದಗಳನ್ನು
ಪೋಣಿಸಿ ಕವಿತೆಯೆಂದು ಬೆಣ್ಣೆಯಂತಹ ನಿನ್ನ ಅಂಗೈ
ಮೇಲಿಟ್ಟು ನೀ ಓದುವೆ ವೇಳೆ
ನಾ ಕರಗುತ್ತಿದ್ದೆ,
ನೀ ನನಗೊಂದು ಹೊಸ ಜಗತ್ತು ಅಂದು ,
ನಾನೋ ನಿನಗೆ ಹತ್ತರಲ್ಲಿ ಹನ್ನೊಂದು,
ಅಪ್ಪಿತಪ್ಪಿಯೂ ನೀನು
ದಕ್ಕದಿರುವುದೆ ಉತ್ತಮವೆಂದು
ಈಗಷ್ಟೇ ತಿಳಿಯುತ್ತಿದೆ,
ಇಲ್ಲದಿದ್ದರೆ ಆಕರ್ಷಣೆಯನ್ನು
ನಿಜವೆಂದು ಅಗ್ನಿಗೆ ಆಹುತಿಯಾಗುವ ಕೀಟವಾಗುತ್ತಿದ್ದೆ,
ಎಂದಾದರೂ ನಿನ್ನನ್ನು ಮತ್ತೊಮ್ಮೆ
ಎದುರು ಕಂಡರೆ ಎಲ್ಲವನ್ನೂ
ಒಮ್ಮೆ ನೆನದು ಮುಗುಳ್ನಗೆ ಮೂಡಿಸಿ
ಮುಂದೆ ಸರಿಯುತ್ತೇನೆ,
ಇದೆಲ್ಲವನ್ನೂ ಒಂದೂ ತಪ್ಪದೆ
ನನ್ನವಳಿಗೆ ಹೇಳುತ್ತಾ
ನಿನ್ನನ್ನು ಮರೆಯುತ್ತೇನೆ.
No comments:
Post a Comment