Wednesday, 30 January 2019

ಮುಸ್ಸಂಜೆ!
----------
ಅರಿಶಿಣ ಹಚ್ಚಿ 
ಶೃಂಗರಿಸಿದ್ದಾರೆ
ಬಾನಿಗೆ ಸಂಜೆ ಸೀಮಂತ!
ಬೆಳಕಿನ ಪರೆದೆಯ 
ಎಳೆಯುತ್ತಿದಂತೆ
ಬೆಳದಿಂಗಳ ಹಾಸಿಗೆಯ 
ಮೇಲೆ ಶಶಿಯು 
ಮಲಗಿದ್ದ ನಗು ನಗುತ್ತ!
****************
ಮಳೆ!
-----
ಇರುಳಲ್ಲಿ ಭೂಮಿಯ
ಕದ್ದು ಮುಚ್ಚಿ
ಚುಂಬಿಸುತ್ತಿದ್ದ ವರುಣನ
ಭಾವಗಳ ಬೆಳಕಲ್ಲಿ 
ಬಂಧಿಸುತ್ತಿತ್ತು ಮಿಂಚು!
***************
ನಿರಾಸೆ!
-------
ಬಾನಿಗೇ ಮಸಿಯ 
ಗೊಬ್ಬರ ಸುರಿದು
ಮಾಡುವ ಚಂದಿರ ಕೃಷಿಯ!
ಇಬ್ಬನಿಯ ಚೆಲ್ಲಿ!
ಒಂದೇ ರಾತ್ರಿಯಲ್ಲಿ 
ಬೆಳೆದ ನಕ್ಷತ್ರಗಳ ಬೆಳೆಯ!
ಎಲ್ಲವನ್ನೂ ನಾಶ ಮಾಡಿದವು
ಮುಂಜಾನೆಯಲ್ಲಿ 
ಬಂದ ಬೆಳಕಿನ ಪ್ರಳಯ!
****************
ಅಪ್ಪ!
----
ಮಗಳ ಮದುಮಗಳಾಗಿ 
ಅಳಿಯನ ಮನೆಗೆ 
ಕಳುಹಿಸುವಾಗಲೇ
ಅರಿವಾಗಿದ್ದು ನನಗೆ 
ನನ್ನ ಹೆಂಡತಿಯ
ಪ್ರಸವ ವೇದನೆ!
***************
ಮನವಿ!
-------
ನಿನ್ನ ನಿದ್ರೆಯಿಲ್ಲದ 
ರಾತ್ರಿಯೊಂದಿದ್ದರೆ
ನೀಡುವೆಯ?
ಹೇಳಿ ಮಲಗಿಸುತ್ತೇನೆ
ನಿನ್ನ ನೆನಪುಗಳಿಂದ ನನ್ನ 
ಎಷ್ಟೋ ಕಣ್ಣ ಮುಚ್ಚದ
ಇರುಳುಗಳ ಕಥೆಯ!
****************

No comments:

Post a Comment