Monday, 28 January 2019

ಹಚ್ಚಿಟ್ಟ ಮೇಣದ ಬತ್ತಿ 
ಪೂರ್ತಿ ಉರಿದು 
ಮುಗಿಯುವ ಮುನ್ನವೇ 
ಅರ್ಧದಲ್ಲಿ ಆರಸಿ 
ಕಿಟಿಕಿಯಿಂದ ಇಣುಕುವ 
ಬೀದಿ ದೀಪದ ಬೆಳಕಿನೊಂದಿಗೆ
ಕೋಣೆಯನ್ನು ಆವರಿಸಿರುವ ಮೌನಕ್ಕೆ
ಮಾತಾಗಿ ಕುಳಿತಿದ್ದೇನೆ!
ನಿದ್ರೆಯು ಕಣ್ಣಿಗೆ ಕಂಬಳಿಯಂತೆ
ಮುಚ್ಚುವವರೆಗೂ ಕೇಳಲು ನಿನ್ನಯ ಮಾತುಗಳಿಲ್ಲ,
ಮುಂಜಾನೆ ಹಣೆಯ ಮೇಲಿನ ನಿನ್ನ ಮುತ್ತಿನೊಂದಿಗೆ
ಇನ್ನು ದಿನಗಳು ಆರಂಭವಾಗುವುದಿಲ್ಲ!
ಸೇತುವೆಯನ್ನು ಹಿಡಿದಿರುವ
ಅತ್ತಿತ್ತಲಿನ ಕಂಬಗಳಂತೆ ನೀನಲ್ಲಿ ನಾನಿಲ್ಲಿ
ನಡುವೆ ಇಬ್ಬರೊಳಗೂ ಇಳಿದು
ಹೋಗುವ ನೆನಪುಗಳ ಹಾವಳಿ!
ಗೋಡೆಯೊಂದಿಗೆ ಮಾತುಗಿಳಿದೇ
ಇರುಳುಗಳು ಮುಗಿಯುತ್ತಿವೆ!
ಕತ್ತಲಿನ ಮೇಲೆ ಬೆಳಕು ಆವರಿಸುವ ಅದ್ಭುತ
ಕ್ಷಣವನ್ನು ಇಬ್ಬನಿಯ ಚಳಿಯಲ್ಲಿ
ಕೊರೆಯುವ ಮಹಡಿಯ ಕಂಬಿಗಳಿಗೆ ಒರಗಿ
ಈ ಬೆಂಗಳೂರಿನ ಬೆರಗನ್ನು ಎಂದು ಸವಿಯುತ್ತೇವೋ
ಒಂದಿಷ್ಟು ಆಸೆಗಳು ಎದೆಯ ಇಣುಕಿನಲ್ಲಿನ್ನೂ
ಅಂಟಿಕೊಂಡಿದೆ, ಕನಸಾಗಿದ್ದ ಹುಡುಗಿಯ ಜಾಗದಲ್ಲೀಗ
ಕಲ್ಪನೆಯಂತಹ
ಹುಡುಗಿಯನ್ನು ಬಯಸುತ್ತಾ...

No comments:

Post a Comment