Tuesday, 29 January 2019

ತವರೂರಿನತ್ತ ಹೋದವಳೇ
ತಲೆದಿಂಬಿನೊಳಗೆ ನಿನ್ನ ಪರಿಮಳವ 
ಅದೇಕೆ ತುಂಬಿದೆ, 
ನಾಸಿಕವೇರಿದ ನಶೆಯು 
ನರ್ತನಗಯ್ಯುತ್ತಿದೆ, 
ಉಕ್ಕಿ ಬರುವ ಉನ್ಮಾದದ ಕಡಲನ್ನು ಹುಣ್ಣಿಮೆಯ ಚಂದಿರನ ಬೆಳಕು
ಉರಿಯುವ ಜ್ವಾಲೆಗೆ
ಉಲ್ಕೆಯಾಗಿ ಬಡಿಯುತ್ತಿದೆ!
ಎದೆಯನ್ನು ಸುಡುವ ಕಾವನ್ನು
ತಲೆದಿಂಬನ್ನು ಆಲಂಗಿಸಿಕೊಂಡು ತಣಿಸುವೆ,
ಅಗ್ನಿಯನ್ನು ಹತ್ತಿ ಆರಿಸುವ ಜಾದು
ಎಲ್ಲಿಯಾದರೂ ಕಂಡೆಯಾ!
ನೀನು ಬಂದ ಮೇಲೆ ಆಷಾಢ ಬೇಗ
ಮುಗಿಯಲ್ಲೆಂದು ಹರಕೆ ಹೊತ್ತು ವಿರಹದಿ
ಉರುಳಿದ ಹಾಸಿಗೆಯ ಏರಿಳಿತದಲ್ಲಿ
ನನ್ನ ಏಕಾಂತದ ಕಹಿಯನ್ನು ಗ್ರಹಿಸೆಯ!?
ಹೇಳಲೇ ಬೇಕು ನಿನಗೆ,
ಬೆಸುಗೆ ಇಲ್ಲದ ಬೇಗೆಯಲ್ಲಿ
ಬೆಂದಿದ್ದ ದೇಹವನ್ನು ತಣಿಸಿದ
ತಣ್ಣೀರು ಬಿಸಿನೀರಾದ ಕಥೆ,
ನೀ ಬರುವವರೆಗೂ ಕಾವೇರಿದ ಸಾಲುಗಳ
ಹೊತ್ತಿರುವ ಕಾಗದ ಉರಿಯದೆ
ಉಳಿಸಿದರೆ ತೋರಿಸುವೆ ಈ ಕವಿತೆ!

No comments:

Post a Comment