ದೂರದಲ್ಲೊಂದು ಆಕಾಶವಾಣಿ
ನಡುರಾತ್ರಿಯಲ್ಲಿ ನಡುನೀರಿನಲ್ಲಿ
ಮುಂದೇನೆಂದು ತಿಳಿಯದೆ
ಒಂದೇ ಸಮನೆ ಈಜುವವನಿಗೆ
ಹಡಗು ಸಿಕ್ಕಂತಹ ಖುಷಿಯಲ್ಲಿ ಭಾರತ
ಕಂಬದ ಮೇಲೆ ಬಣ್ಣ ಮಾಸಿದ
ಬ್ರಿಟಿಷರ ಧ್ವಜ ಇಳಿಯಿತು
ಕಚ್ಚೆದೆಯ ಕಲಿಗಳ ಹೆಗಲ ಮೇಲಿಂದ
ಹೆಮ್ಮೆಯಿಂದ ಹಾರಿತು ತ್ರಿವರ್ಣ!
ಎದ್ದು ಕುಣಿಯುವ ಕಂಗಳಲ್ಲಿ
ಮಧ್ಯರಾತ್ರಿಯೇ ಸೂರ್ಯೋದಯ
ಅಬ್ಬಾ ದೇಶಕ್ಕೆ ದೇಶವೇ ಮೆಲ್ಲನೆ
ತ್ರಿರಂಗಾಗುತ್ತಿದೆ
ಕತ್ತಲಿನಲ್ಲೂ ಅಲ್ಲೊಂದು ಕನಸಿನ
ಕಾಮನ ಬಿಲ್ಲು ಮೂಡುತ್ತಿದೆ
ಮಣ್ಣಿಗಾಗಿ ಮಣಿದ ವೀರರಿಗೆ
ನಗುವಿನ ಹೂವನ್ನು ಅರ್ಪಿಸಿ
ಈಗಷ್ಟೇ ಜನಿಸಿದ ಮಗುವಿನ ಕಿವಿಯಲ್ಲೂ
ಇನ್ನು ಇದು ನಿನ್ನ ಭೂಮಿಯೆಂದು ಕಿರುಚಿ
ಭಾರತಾಂಬೆಯ ಮಣ್ಣಿನ ಕಣವನ್ನು
ಕೈಯಲ್ಲಿ ಹಿಡಿದು ಕಣ್ಣಿಗೊತ್ತಿಕೊಂಡು
ಕುಣಿಯುತ್ತಿವೆ ಭವಿಷ್ಯದ ಬೆಳಕಿನ ಕಿಡಿಗಳು
ಭಾರದ ಕುಡಿಗಳು!
ಮುಂಜಾನೆ ಬರುವ ನೇಸರನ ಕಣ್ಣುಗಳಲ್ಲಿ ಬೆರಗು
ಅರೆ ಇವರಲ್ಲವೇ ನಿನ್ನೆಯವರೆಗೂ ಕೊರಗುತ್ತಾ
ನಾಳಿನ ಉದಯ ನಮಗಾಗಿರಲಿ ಎಂದು ಬೇಡುತ್ತಾ
ನನ್ನನ್ನು ಕಳುಹಿಸಿ ಕೊಡುತ್ತಿದ್ದವರು!
ಎಲ್ಲರ ಕೈಯಲ್ಲೂ ಮೂರು ಬಣ್ಣ
ಎಲ್ಲರೆದೆಯಲ್ಲೂ ಪುಣ್ಯಭೂಮಿಯ ಮಣ್ಣ ಕಣ
ಮುಂದೆ ಅರಳವು ಮೊಗ್ಗುಗಳು
ಸ್ವಾತಂತ್ರದ ಉಸಿರಾಡಲಿ!
#ನಾಡಹಬ್ಬದಶುಭಾಶಯಗಳು
No comments:
Post a Comment