Monday, 28 January 2019

ಕಾಡ್ಗಿಚ್ಚು ನನ್ನೊಳಗೆ ಹೊತ್ತಿಕೊಂಡಿದೆ 
ಆರಿಸುವ ವಿಧಾನವೇ ಆಲಂಗಿಸಿಕೊಳ್ಳುವುದು 
ಎಂದೇನೋ ನಿನಗೂ ತಿಳಿದಿದೆ! 
ಎದುರೆದುರು ಕೂತು ಕಣ್ಣುಗಳಲ್ಲಿ 
ಸಾಣೆ ಹಿಡಿಯುತ್ತಾ. ಮೌನದಿ 
ಮಾತುಗಳನ್ನು ತಿವಿಯುತ್ತಾ
ಇನ್ನೆಷ್ಟು ಹೊತ್ತು ಹೀಗೆ ಕಳೆಯುವುದು,
ಮಧ್ಯಾಹ್ನದ ಸೂರ್ಯ ಸಂಜೆಯ ಪರದೆಯೊಳಗೆ
ಬಚ್ಚಿಟ್ಟುಕೊಳ್ಳುವ ಗಳಿಗೆ ಹತ್ತಿರವಾಯಿತು, ಬಾನಾಡಿಗಳು
ತಮ್ಮ ಗೂಡನ್ನು ಸೇರುವ ಕ್ಷಣ,
ಒಂದು ಮುತ್ತಿಟ್ಟು ನಮ್ಮೀ ಇಂದಿನ
ಭೇಟಿಯನ್ನು ಸವಿಯಾಗಿಸೋಣ!
ದಾರಿಯುದ್ದಕ್ಕೂ ತಲೆಯ ಮೇಲೆ ಹರಡಿಕೊಂಡ
ತಾರೆಯ ಜೊತೆಗೆ ಹಾದಿಯಲ್ಲಿ ಕೈ ಹಿಡಿದು
ನಡೆಯುವಾಗ, ಅಂಗೈಯೊಳಗಿನ
ಬೆಚ್ಚಗಿನ ಕಾವನ್ನು, ಮರು ಭೇಟಿಯವರೆಗೂ
ಕಾಯ್ದಿರಿಸಿಕೊಂಡು ಕಾಯೋಣ!
ತಾಳಿಯ ಬೇಲಿ ಬಿದ್ದೊಡನೆ ಒಂದು ವೃತ್ತದೊಳಗೆ
ಸಿಕ್ಕ ಹುಲ್ಲನ್ನು ಮೆಯ್ಯುವ ಜೋಡಿ ಎತ್ತಿನಂತಹ
ಬದುಕಿಗೂ ಮುನ್ನ ಆಗಸದಿ ಭಾರವಿಲ್ಲದ
ಹಗುರದಿ ಹಾರುವ ಹಕ್ಕಿಯ ಹಕ್ಕನ್ನು
ಆನಂದದಿ ಅನುಭವಿಸೋಣ!

No comments:

Post a Comment