Thursday, 31 January 2019

ಮನದಿಂದ ಮನಕೆ ಹರಿದ ಜೀವನದಿಯ ಜಾಡು ಹಿಡಿದು.....
ಮೌನದಲ್ಲೂ ಮಾತು ಹುಡುಕುತ್ತಿದ್ದೇನೆ ಗೆಳೆಯ..
ನಿನ್ನ ಇರವನ್ನು ನನ್ನಲ್ಲಿ ಕಂಡುಕೊಂಡಿದ್ದೇನೆ.....
ಬರುವೆಯೋ ಬಾರೆಯೋ...
ಸಿಗುವೆಯೋ ಸಿಗದಿರುವೆಯೋ...
ಇದರ ಪರಿವೆ ನನಗಿಲ್ಲ....
ಅದರ ಗೊಡವೆಯು ನನಗಿಲ್ಲ.....
ಇದ್ದರು ಇರದ ಎಷ್ಟೋ ಸಂಬಂಧಗಳಿಗಿಂತ
ನಮ್ಮ ಬಂಧ ಮಿಗಿಲು...
ಗೆಳೆಯ.......
ಅಂತರಂಗ ನುಡಿಸೋ ಸುಪ್ತಗೀತೆಯಂತೆ.....
ಅಂತರಾಳದಲ್ಲಿ ಹರಿಯೋ ಮಂದಕಿನಿಯಂತೆ.....
ಮನದ ಗೂಡಲ್ಲಿ ಮಿಡಿಯೋ ಗುಪ್ತಗಾಮಿನಿಯಂತೆ ....
ಕಣ್ಣಿಗೆ ಕಾಣದ....
ಏನನ್ನು ಕೇಳದ.....
ನನ್ನನ್ನೇ ಆವರಿಸಿರುವ...
ನೀನು
ನಿನ್ನ ಇರವು
ನಿರಂತರ...
ಮೀರಿ ನಿಂತಿದೆ ಇಹ ಪರ............
ಒಂದು ಹಳೆಯ ಪುಟ..

Wednesday, 30 January 2019

ಜೀವನ
ಸಾಗರದ ಅಲೆಗಳು...
ಒಂದರ ಹಿಂದೊಂದು..
ಒಂದಕ್ಕೂ ಹೆಸರಿಲ್ಲ..
ಒಂದಕ್ಕೂ ಗುರಿ ಇಲ್ಲ..
ಹಾಗೆ ಬಂದು ಹೀಗೆ ಹೋದ ಅಲೆಗಳು...
ಬರಿಯ ನೀರು .
ಹೆಸರಿಲ್ಲದ ಉಸಿರಿಲ್ಲದ ನೀರು...
ಬದುಕಿನ ಹೊತ್ತಿಗೆಯಲ್ಲಿ
ನೂರಾರು ಪುಟಗಳು..
ಹೀಗೆ ಬಂದು ಹಾಗೆ ಹೋದ ಖಾಲಿ ಪುಟಗಳು..
ಕೆಲವಕ್ಕೆ ಬಣ್ಣವಿಲ್ಲ...
ಹಲವಕ್ಕೆ ಪದಗಳಿಲ್ಲ....
ಬರಿಯ ಅಕ್ಷರಗಳು.....
ಅರ್ಥವಿಲ್ಲದ ವ್ಯರ್ಥ ಅಕ್ಷರಗಳು...
ಬಾಳ ಬನದಲ್ಲಿ
ನೂರಾರು ಮರಗಳು..
ಹುಟ್ಟಿ ಮುರುಟಿ ಹೋಗೊ ಸಂಬಂಧಗಳು...
ಕೆಲವಕ್ಕೆ ಒಲವಿಲ್ಲ....
ಉಳಿದವಕ್ಕೆ ಬಲವಿಲ್ಲ..
ಬರಿಯ ಬಂಧಗಳು..
ಬೇಡದ ಬಂಧನಗಳು...
ನೀರಲ್ಲೂ ಜೇನ...
ಅಕ್ಷರದಲ್ಲೂ ಹಾಡ..
ಬಂಧನದಲ್ಲೂ ಅನುಬಂಧ
ಹುಡುಕೋದೆ ಜೀವನ....
ಇದು ಬರಿ ಉಸಿರಲ್ಲ ಗೆಳೆಯ...
ಇದು ಜೀವಾಮೃತ...
ಇದನರಿಯದಿದ್ದರೆ...
ಜೀವನ ಅನೃಥ ..
ಕಡಲಿಗೂ ನಿನ್ನ ನೆನಪಿಗೂ
ಎನಿತೀ ಅವಿನಾಭಾವ ಸ್ನೇಹವೋ ಗೆಳೆಯ...
ಕಡಲ ತಟದಲ್ಲಿ, ಮರಳ ಮಡಿಲಲ್ಲಿ
ಪುಟ್ಟ ಕಪ್ಪೆ ಚಿಪ್ಪುಗಳ ಉಡಿಯೊಳಗೆ ಇರುಕಿ ನಡೆವಾಗ
ಶರಧಿಯ ಅಲೆಗಳು ಪಾದಕ್ಕೆ ಸೋಕಿದಾಗ
ಅದೇಕೋ ನಿನ ನೆನಪೇ ಅಬ್ಬರಿಸುತ್ತದೆ ಗೆಳೆಯ...
ಮಳೆಗೂ ನಿನ್ನ ಉಸಿರಿಗೂ
ಎನಿತು ಬಂಧವೋ ಗೆಳೆಯ...
ತುಂತುರು ಹನಿಯಾಗಲಿ, ಬಿರು ಮಳೆಯಾಗಲಿ..
ಹನಿ ನೊಸಲ ಸೋಕಿ, ಕದಪ ಚುಂಬಿಸಿದರೊಮ್ಮೆ..
ತಣ್ಣನೆಯ ಹನಿ ಹನಿಯಲ್ಲೂ ತಾಕುವುದು..
ನಿನ್ನ ಉಸಿರ ಬಿಸಿ ಸ್ಪರ್ಶ ..
ಕಡಲ ಅಲೆಯು
ಮಳೆಯ ಹನಿಯು
ನಮ್ಮೊಲುಮೆಯ ಸಹಿಗಳು ....
ಇರವು, ನೋಟ, ಸ್ಪರ್ಶ ಇನಿತು ಬೇಡೆಮಗೆ
ಒಲವಿದೆ ಎಂದು ತಿಳಿಸಲು.....))
ನಿನ್ನೊಡಲ ನೋಡುತ್ತಾ
ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..
ನಿನ್ನಂತೆ ನಾನೋ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...
ನಿನ್ನೊಳಗೆ ನನ್ನ ನೋಡಿದಾಗ...
ನಾನು ನೀನು ಬೇರೆಯಲ್ಲ ಅನಿಸಿದ್ದೇಕೆ...
ನಿನ್ನ ಕಲರವ
ನನ್ನದೇ ನಗು ಅನಿಸಿದ್ದೇಕೆ...
ನಡುವೆಲ್ಲೋ ನಿನ್ನ ಮೌನ
ನನ್ನೊಳಗಿನ ಸುಪ್ತ ಗಾನ ಅನಿಸಿದ್ದೇಕೆ...
ಅಲ್ಲೆಲೋ ನೀನು ಧುಮ್ಮಿಕ್ಕುವಾಗ
ನನ್ನೊಳಗಿನ ಭಾವನೆಗಳ ಮಹಾಪೂರ ಅನಿಸಿದ್ದೇಕೆ ..
ನೀನು ಕಡಲಿನೊಡನೆ ಬೆರೆಯಲು ಸರಸರನೆ ಹರಿವಾಗ...
ನಲ್ಲನೆಡೆಗಿನ ನನ್ನ ನಡೆಯು ನೆನಪಾದುದ್ದೇಕೆ...
ಶರಧಿಯೊಡಲ ಸೇರಿದೊಡನೆ ನಿನ್ನ ನೀನು ಮರೆತಾಗ
ನನ್ನ ಅವನ ಮಿಲನ ನೆನೆದು ಕೆಂಪಾದುದ್ದೇಕೆ ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...
ನಿನ್ನೊಡಲ ನೋಡುತ್ತಾ
ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..
ನಿನ್ನಂತೆ ನಾನೋ..
ಎನಿಸುವಾಗ.....
ನನ್ನ ಕೊಡುಕೊಳ್ಳುವಿಕೆಯ ಪರಿ..
ನಿನ್ನ
ಏನು ಬಯಸದೆ ಪ್ರೀತಿ ಹರಿಸುವ ಪರಿ
ಮನದಲೆಲ್ಲೋ ಮಿಂಚಿನಂತೆ ಹೊಳೆದು...
ನೀನೆಲ್ಲಿ...ನಾನೆಲ್ಲಿ
ಅನಿಸಿದ್ದು ಸುಳ್ಳಲ್ಲ ಕಾವೇರಿ...))
ಮೊನ್ನೆ ತಲಕಾಡಿನ ಕಾವೇರಿಯ ತಟದಲ್ಲಿ ಅವಳೊಡನೆ ನಡೆದ ನನ್ನ ಮೌನ ಸಂಭಾಷಣೆ...
ನಿನಗಾಗಿ ಕಾಯುವ ನನ್ನ ಹೆಗಲ ಮೇಲೆ ..
ಮತ್ತೊಂದು ಹಗಲು ಇನ್ನೊಂದು ಇರುಳು 
ಕಳೆದು ಹೋಗಿದೆ ಗೆಳೆಯ
ವರುಷಗಳೇ ಉರುಳಿದರು ಈ ಕಾಯುವಿಕೆ ಬದಲಾಗದು 
ನೀನು ಬರಲಾರೆಯೆಂದು ನನಗೆ ತಿಳಿದಿದ್ದರೂ......
ನಾನು ಕಾಯುತ್ತಿರುವೆ ಎಂದು ನಿನಗೆ ಅರಿವಿದ್ದರೂ...
ನಮಗಿಬ್ಬರಿಗೂ ಗೊತ್ತು....
ಅದು ಕಾಯುವಿಕೆಯಲ್ಲ..
ವಿರಹವಲ್ಲ...
ಮೋಹವಲ್ಲ.....
ಅದು ಪ್ರೀತಿ ಪ್ರೇಮಕ್ಕು ಮೀರಿದ 
ಸುಂದರ ಅನುಬಂಧ ಎಂದು
ಅದಕ್ಕೆ ಬಂಧವಿಲ್ಲ...
ಮುಪ್ಪಿಲ್ಲ......
ಆದರೂ ನಾನು ಕಾಯುವೆ ಗೆಳೆಯ
ಸಾವಿನಾಚೆಯ ಬದುಕಿನ ಮಿಲನಕ್ಕಾಗಿ..
ಮೌನವಾಗಿ.....
ಒಂದು ಸಣ್ಣ ನೋವ ಹನಿ ಮನದ ಕಡಲ ಒಳಗೆ ಸೇರಿ
ನೋವ ಕೊಟ್ಟಿತು...
ನೊಂದ ಮನಸು ತಾನೇ ತನ್ನ ವಿಧಿಯ ಹಳಿದಿತ್ತು..
ಅಲ್ಲೇ ಇದ್ದ ಕಪ್ಪೆ ಚಿಪ್ಪು ನನ್ನ ನೋಡಿತು..
ನೋಡಿ ಪಿಸುನುಡಿಯಿತು...
ಅಯ್ಯೋ ಮರುಳೆ , ಇಲ್ಲಿ ಕೇಳು ನನ್ನ ಕಥೆಯನು ..
ನನ್ನ ಒಡಲ ಸೇರೋ ಹನಿಯು ಕೊಡುವ ನೋವನ್ನು...
ಹನಿಯು ಬಿದ್ದ ಒಡನೆ ನಾನು ಪಡುವ ಪಾಡನು ...
ನೋವು ಎಂದು ನಾನು ವಿಧಿಯನೆಂದು ಹಳಿಯೇನು...
ಬಿದ್ದ ಹನಿಯ ಒಡಲ ಒಳಗೆ ಮುತ್ತಾಗಿಸುವೆನು....!!!!
ನಿನ್ನ ನೋವ ನಿನ್ನ ಒಳಗೆ ನೀನು ಬದಲಿಸು...
ನೋವೆ ಹೆದರಿ ಮುತ್ತು ಆಗೋವರೆಗೆ ಅರಳಿಸು.. !!!
ಅರಿತೆ ನಾನು ನೋವಿನಲ್ಲೂ ಮುತ್ತು ಬೆಳೆಯೋ ಆಟವ...
ಬದುಕ ಬನದ ಸಾರ್ಥಕತೆಯ ನಿನ್ನ ಪಾಠವ .

ಮುದ್ದು ಮುಖದ ಅರಳಿದ ನಗುವಿನ ಸೊಬಗಿ ನನ್ನ ಗೆಳತಿ..
ನಗುವಿನ ಚಿಲುಮೆ......ಒಲುಮೆಯ ಜಲಪಾತ.
ಅಬ್ಬಬ್ಬ ...ಎಂದು ಮತ್ಸರ ಪಡುವಷ್ಟು ಪ್ರೀತಿಯ ಹರಿಸುವ ಮಹಾನದಿ...
ಆದರೆ .....
ಆ ಸುಂದರ ಕಣ್ಣುಗಳ ಹಿಂದೆ ನೋವು ಅಡಗಿದೆ...
ಆ ನಗುವಿನ ಹಿಂದೆ ಏಕಾಂಗಿ ಹೃದಯದ ಹಾಡಿದೆ..
ಆ ಪ್ರೀತಿಯ ಒರತೆಯ ಹಿಂದೆ ಭರಿಸಲಾರದಷ್ಟು ಪ್ರೀತಿಯ ಕೊರತೆ ಇದೆ....
ಅಂದಿನ ಮಾಸದ ಗಾಯದ ಗುರುತಿದೆ...
ಎಲ್ಲರ ನಡುವೆ ಇದ್ದಾಗ ..
ಅಳಿಸಲಾರದ ನಗೆಯ ಚೆಲುವೆ ,
ಯಾರು ಇಲ್ಲದಿರುವಾಗ.....
ಕಣ್ಣಿರ ಕಡಲಾಗುತ್ತಾಳೆ......
ಮೌನದ ಮಡುವಾಗುತ್ತಾಳೆ....


ಆದರೂ....
ಆ ನೋವಿಗೆ ಕಾರಣ ಯಾರೇ ಆದರೂ..ಏನೇ ಆದರು....
ಕ್ಷಮಿಸೆಂದು ಕೇಳದಿದ್ದರೂ ಕ್ಷಮಿಸುತ್ತ...
ಮತ್ತೆ ನಗುತ್ತಲೇ ಮುನ್ನಡೆಯುತ್ತಿದ್ದಾಳೆ...
ಹೆಜ್ಜೆ ಹೆಜ್ಜೆಗೂ ನಗೆಯ ಮುತ್ತು ಸುರಿಸುತ್ತ...
ಬೆಳಕಿನ ಕಿರಣದ ಜಾಡು ಹಿಡಿದು...
ಇಂದಲ್ಲ ನಾಳೆ....
ನಾಳೆಯಲ್ಲದಿದ್ದರೆ ಮತ್ತೊಂದು ದಿನ...
ಎಂಬ ಆಸೆಯ ಮೂಟೆಯ ಹೊತ್ತು...
ತನ್ನ ನಂಬಿದವರಿಗಾಗೀ.
ಧೃಡವಾಗಿ....
ನಗೆಯ ಚಿಲುಮೆಯಾಗಿ...
ಮಳೆಯಾಗುತ್ತಿದೆ.
ಹನಿ ಹನಿಯದೂ ಒಂದೊಂದು ಕತೆ ..
ಜಗದ ದನಿಗೆ ಕಿವುಡಾಗಿ....
ಕತೆ ಕೇಳುತ್ತಿದ್ದೇನೆ ...
ನೊಸಲ ತಾಕಿದ ಹನಿಯು ನೀನಿಟ್ಟ ಸಿಂದೂರದ ....
ಕಣ್ಣಂಚ ತಾಕಿದ ಹನಿ ಕಂಬನಿಯೊಡನೆ ಕೂಡಿ ನಿನ್ನ ಸಾಮಿಪ್ಯ ಬಯಸುವ..
ತುಟಿಯಂಚ ತಾಕಿದ ಬಿಂದು ಮುತ್ತಿನ ಮತ್ತಿನ.....
ಒಡಲ ತಾಕಿದ ಹನಿ ನಮ್ಮ ಮಿಲನದ......
ಕತೆಗಳನ್ನು ಹೇಳುತ್ತಿವೆ.
ಕತೆ ಕೇಳುತ್ತಿರುವ ಮನ
ಮಳೆಗೆ ಬಿರಿದ ಇಳೆಯಂತೆ...
ಒಲವಿನ ವೀಣೆ ನುದಿಸುತ್ತಿದೆ....
ಮೌನವಾಗಿ...
ನಿನಗಾಗಿ....
ನಿನ್ನ ಪ್ರೀತಿಗಾಗಿ....
ಪ್ರೀತಿಯ ಮಳೆಯಾಗಿ...
ಹಿತವಾಗಿ..
ಸೊಗಸಾಗಿ...
ನಿನ್ನ ನೆನಪಿನ ಸಂಪುಟದಲ್ಲಿ 
ಕಳೆದು ಹೋಗಿದ್ದೇನೆ ಗೆಳೆಯ........
ಪುಟ ಪುಟದಲ್ಲೂ ..
ಪದ ಪದದಲ್ಲೂ ..
ನಿನ್ನೊಳಗಿನ ನನ್ನನ್ನು...
ನನ್ನೊಳಗಿನ ನಿನ್ನನ್ನು...
ನಮ್ಮೊಳಗಿನ ಪ್ರೀತಿಯನ್ನು..
ನಮ್ಮಿಬ್ಬರ ಸಾಂಗತ್ಯವನ್ನು ...
ಕಾಣುತ್ತಿದ್ದೇನೆ ಗೆಳೆಯ....
ಸಂಪುಟದ ತುಂಬೆಲ್ಲ ....
ಸಾಮಿಪ್ಯವನ್ನೇ ಬೇಡದ...
ಸ್ಪರ್ಷವನ್ನೇ ಕೇಳದ...
ಬಣ್ಣ ಬಣ್ಣದ ಪ್ರೀತಿಯ ಹೂಗಳು..
ಕವಿತೆಗಳು...
ರಾಗಗಳು....
ಕಳೆದುಹೋಗಿದ್ದೇನೆ ನಾನು
ನಿನ್ನ ಸಂಪುಟದಲ್ಲಿ ..
ಪ್ರೀತಿಯಲಿ..
ಕವಿತೆಯಲಿ...
ರಾಗದಲಿ..!!!!!
ಮುಸ್ಸಂಜೆ!
----------
ಅರಿಶಿಣ ಹಚ್ಚಿ 
ಶೃಂಗರಿಸಿದ್ದಾರೆ
ಬಾನಿಗೆ ಸಂಜೆ ಸೀಮಂತ!
ಬೆಳಕಿನ ಪರೆದೆಯ 
ಎಳೆಯುತ್ತಿದಂತೆ
ಬೆಳದಿಂಗಳ ಹಾಸಿಗೆಯ 
ಮೇಲೆ ಶಶಿಯು 
ಮಲಗಿದ್ದ ನಗು ನಗುತ್ತ!
****************
ಮಳೆ!
-----
ಇರುಳಲ್ಲಿ ಭೂಮಿಯ
ಕದ್ದು ಮುಚ್ಚಿ
ಚುಂಬಿಸುತ್ತಿದ್ದ ವರುಣನ
ಭಾವಗಳ ಬೆಳಕಲ್ಲಿ 
ಬಂಧಿಸುತ್ತಿತ್ತು ಮಿಂಚು!
***************
ನಿರಾಸೆ!
-------
ಬಾನಿಗೇ ಮಸಿಯ 
ಗೊಬ್ಬರ ಸುರಿದು
ಮಾಡುವ ಚಂದಿರ ಕೃಷಿಯ!
ಇಬ್ಬನಿಯ ಚೆಲ್ಲಿ!
ಒಂದೇ ರಾತ್ರಿಯಲ್ಲಿ 
ಬೆಳೆದ ನಕ್ಷತ್ರಗಳ ಬೆಳೆಯ!
ಎಲ್ಲವನ್ನೂ ನಾಶ ಮಾಡಿದವು
ಮುಂಜಾನೆಯಲ್ಲಿ 
ಬಂದ ಬೆಳಕಿನ ಪ್ರಳಯ!
****************
ಅಪ್ಪ!
----
ಮಗಳ ಮದುಮಗಳಾಗಿ 
ಅಳಿಯನ ಮನೆಗೆ 
ಕಳುಹಿಸುವಾಗಲೇ
ಅರಿವಾಗಿದ್ದು ನನಗೆ 
ನನ್ನ ಹೆಂಡತಿಯ
ಪ್ರಸವ ವೇದನೆ!
***************
ಮನವಿ!
-------
ನಿನ್ನ ನಿದ್ರೆಯಿಲ್ಲದ 
ರಾತ್ರಿಯೊಂದಿದ್ದರೆ
ನೀಡುವೆಯ?
ಹೇಳಿ ಮಲಗಿಸುತ್ತೇನೆ
ನಿನ್ನ ನೆನಪುಗಳಿಂದ ನನ್ನ 
ಎಷ್ಟೋ ಕಣ್ಣ ಮುಚ್ಚದ
ಇರುಳುಗಳ ಕಥೆಯ!
****************
ಪ್ರೀತಿ! 
ಪಕ್ಕದ ಮನೆಗೆ ಹೊಸದಾಗಿ ಬಂದಿರೋ ಮಗು ತರ...
ಹತ್ತಿರ ಹೋದರೆ ಅಳುತ್ತೆ ....
ಎತ್ತಿಕೊಳೋಣ ಅಂದರೆ ಬರಲ್ಲ ಅಂತ ಹಠ ಮಾಡುತ್ತೆ...
ಅದಕ್ಕೆ ನಾವು ನೋಡಿದ ತಕ್ಷಣ ಇಷ್ಟ ಆಗಲ್ಲ 
ನೋಡ್ತಾ ನೋಡ್ತಾ ಇಷ್ಟ ಆಗುತ್ತೆ ..
ಒಂದು ದಿನ ನಾವು ಹೊರಗೆ ಹೋಗ್ತಾ ಇರಬೇಕಾದರೆ
ಮಾಡಿಯ ಮೇಲೆ ನಿಂತು ಸಣ್ಣ ನಗು...
ಆಮೇಲೆ ಒಂದು ದಿನ 
ಗಾಡಿಯಲ್ಲಿ ಹೋಗುವಾಗ ಟಾಟಾ ಮಾಡುತ್ತೆ...
ಸರಿ ನಮ್ಮನ್ನ ಇಷ್ಟ ಪಡ್ತಾ ಇದ್ದೀಯಲ್ಲ ಅಂತ ಹಿಡಿಯಕ್ಕೆ ಹೋದರೆ
ನಗ್ ನಗ್ತಾನೆ ಮನೆಯೊಳಗೇ ಓಡಿ ಹೋಗುತ್ತೆ..
ನಾವು ಏನು ಅಂತ ಅರ್ಥ ಆದಮೇಲೆ 
ನಮ್ಮನ್ನ ನೋಡಿದ ಕೂಡಲೇ ..
ಓಡೋಡಿ ಬರುತ್ತೆ!!
-ಪ್ರಕಾಶ್ ಶ್ರೀನಿವಾಸ್
ಕನಸಲ್ಲೂ ನಿಲ್ಲುತ್ತಿಲ್ಲ ನನ್ನ ಬಿಕ್ಕಳಿಕೆ,
ಕಾರಣ ನೀ ಮಾಡಿತ್ತಿರುವ ನನ್ನ ಚಡಪಡಿಕೆ.
ಮನಸ್ಸಿಗೆ ಹೇಳು ನೀ ತಿಳುವಳಿಕೆ,
ಇಲ್ಲದಿದ್ದರೆ ಉಳಿದಾವು ನಮ್ಮ ಪಳಿಯುಳಿಕೆ.
--
ಸದಾ ಅವರಿವರ ಆಡಿಕೊಳ್ಳುವ ಆಗುಂತಕರಿಗೆ
ಅರಿವಾದೀತೆ ಅನ್ಯರ ಅಂತರಾಳದ ಶೋಕಗೀತೆ..!
ಚುಚ್ಚಿ ನೋಯಿಸುವ ಮುಳ್ಳುಗಳಲಿ ಅದೆಷ್ಟು 
ಹುಡುಕಿದರೂ ಸಿಗಲಾರದು ಮಾನವೀಯತೆ..!!

Tuesday, 29 January 2019

ಹುಚ್ಚೆದ್ದು ಕುಣಿಯುತ್ತಿದೆ ಹುಣ್ಣಿಮೆ ಇಂದು,
ಕಿಚ್ಚಿಟ್ಟು ಕನಸುಗಳು ಉರಿಸಿಟ್ಟರೂ 
ತಣಿಯದೆ ಕುಣಿದಿದೆ, 
ಉರಿಯುವ ಸ್ವಪ್ನಗಳಿಂದ 
ಕಿಡಿ ಹಾರಿ, ಇಳಿದಿದೆ 
ಕಂಬನಿ ಕೆನ್ನೆಯ ಸವರಿ,
ನನ್ನಯ ಚೀರಾಟಕ್ಕೆ ತಾರೆಗಳು
ನಡುಗಿ ನಿಂತಿವೆ,
ದಡವನ್ನು ದಂಡಿಸುವಂತೆ
ಬಡಿಯುವ ಅಲೆಗಳ ಸಮಕ್ಕೆ
ವಸ್ತ್ರ ಧರಿಸದೇ ಅಸ್ತ್ರ
ಹಿಡಿದಿದೆ ಸೋಲುಗಳು
ಸೋಲಿಸಿ ಬೀಗುತ್ತೇನೋ?
ಸತ್ತು ಸಾಧಿಸುತ್ತೇನೋ?
ಹಳ್ಳಕ್ಕೆ ಬಿದ್ದವನ
ಸುತ್ತಲೂ ಆಡಿಕೊಳ್ಳುವವರು,
ಎದ್ದು ಬಿಟ್ಟರೆ ಚಾಡಿ ಹೇಳುವವರು,
ನಡುವೆ ಯಾರು , ನಮ್ಮವರು,
ಗೆಲುವಿರುವುದೇ ಇಲ್ಲಿ,
ನಮ್ಮವರ ಗುರುತಿಸಿ ಬಿಟ್ಟರೆ,
ಸೋಲು ಸಹ ಸಂತೋಷವೇ,
ಜೊತೆ ಸೇರಿ ನಗುವವರಿಲ್ಲದೆ
ಸಿಗುವ ನಗುವು ಸಹ
ಒಂದು ರೀತಿಯ ಕಣ್ಣೀರಿಲ್ಲದ ಅಳುವೆ...

ಬೆರೆತ ಬಿಸಿ ತಿಳಿಸುತ್ತಿದೆ,
ಹಿತವಾದ ಕಾವಿನಲ್ಲಿ ಜನಿಸಿದ
ನನ್ನೊಳಗಿನ ರಸಕಾವ್ಯಗಳನ್ನು
ಉಚ್ಚರಿಸಲಾಗದೆ ಒದ್ದಾಡುತ್ತಿದ್ದೇನೆ,
ಒಪ್ಪಿಗೆಯ ನೀ ಕೊಟ್ಟರೆ
ಅಧರದಿ ಅಧರದ ಮೇಲೆ
ಅಕ್ಷರವನ್ನೊತ್ತವಂತೆ ಒತ್ತಿ
ತಿಳಿಸುತ್ತೇನೆ, ಈ ಇರುಳಿಗೂ
ತುಸು ಬಣ್ಣಗಳನ್ನು ತುಂಬೋಣ,
ಹಗಲಿನ ಬೆಳಕಿನಲ್ಲಿ ಕತ್ತಲಲ್ಲಿ
ಕಳೆದ ಅಂಗಿಯನ್ನು ಹುಡುಕೋಣ!
ಮುತ್ತಿನ ಸದ್ದು ಕೋಣೆಯ
ಗೋಡೆಗೆ ಬಡಿದು ಹಿಂತಿರುಗುತ್ತಿದೆ,
ನಮ್ಮ ಮದನಯುದ್ಧವನ್ನು
ಕಂಡು ಕನ್ನಡಿಯೂ ಬೆವರಿದೆ!

ನೂರಾರು ಕಥೆಯಲ್ಲಿ ನಿನ್ನೊಂದು ಪಾತ್ರ
ವಿವಿಧ ವಿರಹದಲ್ಲಿರುವವರಿಗೆ ನೀನೊಬ್ಬ ಮಿತ್ರ,
ಹುಣ್ಣಿಮೆಯೆಂದು ಅಂದವನ್ನು ಅರಳಿಸಿ ನಿಲ್ಲುವವನೆ
ನಿನ್ನ ಮೋಹದ ಉನ್ಮಾದದಲ್ಲಿ ಕಡಲ ಕೆರಳಿಸಿ ನಗುವವನೆ,
ನನ್ನ ಅದೆಷ್ಟೋ ರಾತ್ರಿಗಳು ನಿನ್ನ ಮುಖವನ್ನು ನೋಡುತ್ತಾ
ಬೆಳಕಾಗಿವೆ, ಅದೆಷ್ಟೋ ಕವನಗಳಿಗೆ ನೀನೆ ತಾನೇ ಸೇತುವೆ,
ಮೌನವಾಗಿ ಬೇಡುತ್ತೇನೆ, ನನ್ನೊಂದಿಗೆಯೇ ಇದ್ದು ಬಿಡು,
ಇಲ್ಲದಿದ್ದರೆ ನೀ ಮೇಲೆ ಹೋದ ದಾರಿಯ ತೋರು
ನಾನೇ ಬಂದು ಸೇರುತ್ತೇನೆ ನಿನ್ನ ಗೂಡು.
ನಮ್ಮಿಬ್ಬರಿಂದ ಅಬ್ಬರದಿ
ಆರಂಭವಾಗವ ಕಾಮನ ಹಬ್ಬದಲ್ಲಿ
ನೂರು ಬಣ್ಣಗಳನ್ನು ತುಂಬೋಣ,
ದೇಹದಿಂದ ಜಾರಿರುವ ಅಂಗಿಯಲ್ಲಿ
ಉಳಿದ ಮುತ್ತುಗಳನ್ನು ಕಟ್ಟಿಡೋಣ!
ಕೋಣೆಯೊಳಗೆ ಹೊತ್ತಿಸಿಟ್ಟ ಮೇಣ
ಕಾವಿನಲ್ಲಿ ತುಸು ಬೇಗ ಕರಗಲಿ,
ಕತ್ತಲೊಳಗೆ ಬಚ್ಚಿಟ್ಟುಕೊಂಡ ಬೆಳಕು
ಇನ್ನೊಂದಿಷ್ಟು ಹೊತ್ತು ನಿದ್ರಿಸಲಿ!
ಬಿಸಿಯುಸಿರ ಬಸಿಯುತ್ತ ಬುಸುಗುಡುವವಳೇ
ಪೊರೆಕಳಚಿದ ಸರ್ಪದಂತೆ ನಿನ್ನ ಬರಸೆಳೆದು
ಬಳ್ಳಿಯಂತೆ ಸುತ್ತಿ ಹಿಡಿಯಲೇ!
ಸರಸದ ಸರ್ಕಾರದಲ್ಲಿ ಇನ್ನು ನೀನೆ ಪ್ರಧಾನಿ,
ನಮ್ಮೀ ಕಾವೇರಿದ ಕದನವನ್ನು ಕಂಡು
ಗೋಡೆಯಾ ಗಡಿಯಾರ
ಸುತ್ತುವುದ ಮರೆತು ಆಗಲಿ ಮೌನಿ!
ತವರೂರಿನತ್ತ ಹೋದವಳೇ
ತಲೆದಿಂಬಿನೊಳಗೆ ನಿನ್ನ ಪರಿಮಳವ 
ಅದೇಕೆ ತುಂಬಿದೆ, 
ನಾಸಿಕವೇರಿದ ನಶೆಯು 
ನರ್ತನಗಯ್ಯುತ್ತಿದೆ, 
ಉಕ್ಕಿ ಬರುವ ಉನ್ಮಾದದ ಕಡಲನ್ನು ಹುಣ್ಣಿಮೆಯ ಚಂದಿರನ ಬೆಳಕು
ಉರಿಯುವ ಜ್ವಾಲೆಗೆ
ಉಲ್ಕೆಯಾಗಿ ಬಡಿಯುತ್ತಿದೆ!
ಎದೆಯನ್ನು ಸುಡುವ ಕಾವನ್ನು
ತಲೆದಿಂಬನ್ನು ಆಲಂಗಿಸಿಕೊಂಡು ತಣಿಸುವೆ,
ಅಗ್ನಿಯನ್ನು ಹತ್ತಿ ಆರಿಸುವ ಜಾದು
ಎಲ್ಲಿಯಾದರೂ ಕಂಡೆಯಾ!
ನೀನು ಬಂದ ಮೇಲೆ ಆಷಾಢ ಬೇಗ
ಮುಗಿಯಲ್ಲೆಂದು ಹರಕೆ ಹೊತ್ತು ವಿರಹದಿ
ಉರುಳಿದ ಹಾಸಿಗೆಯ ಏರಿಳಿತದಲ್ಲಿ
ನನ್ನ ಏಕಾಂತದ ಕಹಿಯನ್ನು ಗ್ರಹಿಸೆಯ!?
ಹೇಳಲೇ ಬೇಕು ನಿನಗೆ,
ಬೆಸುಗೆ ಇಲ್ಲದ ಬೇಗೆಯಲ್ಲಿ
ಬೆಂದಿದ್ದ ದೇಹವನ್ನು ತಣಿಸಿದ
ತಣ್ಣೀರು ಬಿಸಿನೀರಾದ ಕಥೆ,
ನೀ ಬರುವವರೆಗೂ ಕಾವೇರಿದ ಸಾಲುಗಳ
ಹೊತ್ತಿರುವ ಕಾಗದ ಉರಿಯದೆ
ಉಳಿಸಿದರೆ ತೋರಿಸುವೆ ಈ ಕವಿತೆ!
ನಿನ್ನಯ ಮುತ್ತಿನ ತೇವದಲ್ಲಿ 
ನಾನೊಮ್ಮೆ ಮುಳುಗುವೆ 
ನಾವಿಬ್ಬರೂ ಸನಿಹವಾಗುವ
ಮುನ್ನವೇ ಕೋಣೆಯ ಕನ್ನಡಿಗಳು ಬೆವರಿವೆ
ಕಿಟಕಿಯನ್ನು ಹಾದು ನೇಸರನ 
ಕಿರಣಗಳು ಬರುವವರೆಗೂ
ಸರಿದಿರಲಿ ಕತ್ತಲಿಗೆ ಉಡಿಸಿದ ಬೆಳಕಿನ ಸೆರಗು!
ಆಗಸದಲ್ಲಿರುವ ಸ್ವರ್ಗಕ್ಕೇರಲು
ಆಸೆಯಿಂದ ನಮ್ಮೀ ದೇಹವನ್ನೇ ಹಗ್ಗದಂತೆ
ಒಂದೊಂದು ರಾತ್ರಿಯೂ ಹೆಣೆಯೋಣ.
ಉನ್ಮಾದದ ಉಚ್ಚರಣೆಯೇ
ಕಾಮದ ಕಾಗದದ ಮೇಲಿನ ಕವನ.

ಮಿಸ್ ಕಾಲ್ ಕೊಡುವೆ ನಾನು!
ಬೇಸಿಕ್ ಮೊಬೈಲ್ ಹಿಡಿದು
ಬೇಸರವೆನ್ನಿಸಿದೆ
ನೀನಿಲ್ಲಿ ಬಂದರೆ ನಿನ್ನಯ
ಬೆರಳೊಂದಿಗೆ ಬೆರಳು ಬೆಸೆದು
ತುಸು ದೂರ ಕಾಲ್ಗೆಜ್ಜೆಯ
ಮಾತುಗಳನ್ನು ಕೇಳಿಸಿಕೊಂಡು ನಡೆದು
ಒಂದು ಕಪ್ ಕಾಫಿಯನ್ನು ಬೈ ಟೂ
ಮಾಡಿಕೊಂಡು ಸೇವಿಸುತ್ತಾ
ಗಳಿಗಳಿಗೂ ಸವಿಯನ್ನು ಬೆರೆಸೋಣ,
ಸಾಲುಗಳು ಬೇಕಿಲ್ಲ ನಾವಿಬ್ಬರೂ
ಒಟ್ಟಿಗಿರುವ ಕ್ಷಣವೇ ಕವನ!

Monday, 28 January 2019

ನಿನ್ನಯ ಬಿಸಿಯುಸಿರು 
ಸಹನೀಯವಾಗುತ್ತಿರೆ 
ಒಡಲೊಳಗಿನ ಉಷ್ಣ 
ಉಲ್ಕೆಯಂತೆ ಬಡಿಯುತ್ತಿದೆ! 
ನನ್ನೀ ಕೆನ್ನೆಯ ಮೇಲೆ 
ನಿನ್ನ ಮೂಗುತ್ತಿಯು ಒರಸುವ ವೇಳೆ
ನಿನ್ನಯ ಬೆನ್ನ ಮೇಲೆ ನನ್ನೀ
ಉಗುರು ಗೀಚುವ ಸ್ಪರ್ಶವನ್ನು
ನಾನು ಅನುಭವಿಸುವೆ!
ಅಪ್ಪಿಕೊಂಡ ವೇಳೆ ಒಂದೆರೆಡು
ಮಚ್ಚೆ ನಮ್ಮೀ ಮೈಗಳನ್ನು
ಬದಲಾಯಿಸಿಕೊಂಡಿವೆ!
ಆಸೆಯೆಲ್ಲಾ ತೀರುವವರೆಗೆ
ಆಯುಸ್ಸಿನ ರೇಖೆ ನೀಳಲಿ
ಎಂದು ನಾ ಬೇಡುವೆ!
ಮಹಡಿಯ ಮೇಲಿನ ಏಕಾಂತದ 
ವಿಶ್ರಾಂತಿಗೆ ಜೊತೆಯಾದ ತಂಗಾಳಿ
ಚಂದಿರನ ಮಾತಿಗೆ ಕಿವಿಗೊಟ್ಟಿತೇನೋ 
ಎನ್ನಿಸುತ್ತಿದೆ ತಂಗಿನಗರಿ. 
ದೂರದಲೆಲ್ಲಿಂದಲೋ ತೇಲಿ ಬರುವ 
ಕೊಳಲಿನ ನಾದ ಕಲ್ಪನೆಯೋ
ನಿಜವೋ ಎಂದು ತಿಳಿಯಲು ಇಳಿಯದೆ
ಕಣ್ಮುಚ್ಚಿ ಅನುಭವಿಸುತ್ತಾ
ಮನಸಿನ ಪುಟವನ್ನು ತಿರುವಿದೊಡನೆ
ಅಬ್ಬಾ ಈ ಒಂದು ಬದುಕಿನಲ್ಲಿ ಅದೆಷ್ಟು ತಿರುವು!
ಕೈ ರೇಖೆ ಸವೆಯುವಂತೆ ಹಿಡಿದು
ಸುತ್ತಾಡಿದ ಪ್ರೀತಿ ಕೈಯ ರೇಖೆಯಲ್ಲಿ ಏರಲಿಲ್ಲ
ನೂರಾರು ಕಲ್ಪನೆಯಾಗಿ ಕಲ್ಪಿಸಿಕೊಂಡ
ಬದುಕು ಈಗಿನದಲ್ಲ!
ಕರಿಮಣಿಯನ್ನು ಸವರಿ ಇಳಿಯುವ ಕಂಬನಿಗೆ
ಒರಸುವ ಬೆರಳಿಲ್ಲ!
ಮಗ್ಗಲು ಬದಲಾಯಿಸಿ
ಆಳವಾದ ನಿದ್ರಿಯಿಂದ ಮಗು ಎಚ್ಚರಗೊಳ್ಳುವ ಮುನ್ನ
ಕೆನ್ನೆಯ ದಾಟಿದ ಕಣ್ಣೀರಿನೊಂದಿಗೆ
ಹೃದಯಕ್ಕೆ ಅಂಟಿಕೊಂಡ ನೆನಪುಗಳನ್ನು
ಆ ಕ್ಷಣ ಒರೆಸಿಕೊಂಡು
ಎಂದೂ ಮುಗಿಯದ ಜೀವನದ ಪಯಣಕ್ಕೆ
ತುಸು ದಣಿವಾರಲು ನಿದ್ರೆಗೆ ಜಾರಿದಳು!

ದೂರದಲ್ಲೊಂದು ಆಕಾಶವಾಣಿ
ನಡುರಾತ್ರಿಯಲ್ಲಿ ನಡುನೀರಿನಲ್ಲಿ
ಮುಂದೇನೆಂದು ತಿಳಿಯದೆ
ಒಂದೇ ಸಮನೆ ಈಜುವವನಿಗೆ
ಹಡಗು ಸಿಕ್ಕಂತಹ ಖುಷಿಯಲ್ಲಿ ಭಾರತ
ಕಂಬದ ಮೇಲೆ ಬಣ್ಣ ಮಾಸಿದ
ಬ್ರಿಟಿಷರ ಧ್ವಜ ಇಳಿಯಿತು
ಕಚ್ಚೆದೆಯ ಕಲಿಗಳ ಹೆಗಲ ಮೇಲಿಂದ
ಹೆಮ್ಮೆಯಿಂದ ಹಾರಿತು ತ್ರಿವರ್ಣ!
ಎದ್ದು ಕುಣಿಯುವ ಕಂಗಳಲ್ಲಿ
ಮಧ್ಯರಾತ್ರಿಯೇ ಸೂರ್ಯೋದಯ
ಅಬ್ಬಾ ದೇಶಕ್ಕೆ ದೇಶವೇ ಮೆಲ್ಲನೆ
ತ್ರಿರಂಗಾಗುತ್ತಿದೆ
ಕತ್ತಲಿನಲ್ಲೂ ಅಲ್ಲೊಂದು ಕನಸಿನ
ಕಾಮನ ಬಿಲ್ಲು ಮೂಡುತ್ತಿದೆ
ಮಣ್ಣಿಗಾಗಿ ಮಣಿದ ವೀರರಿಗೆ
ನಗುವಿನ ಹೂವನ್ನು ಅರ್ಪಿಸಿ
ಈಗಷ್ಟೇ ಜನಿಸಿದ ಮಗುವಿನ ಕಿವಿಯಲ್ಲೂ
ಇನ್ನು ಇದು ನಿನ್ನ ಭೂಮಿಯೆಂದು ಕಿರುಚಿ
ಭಾರತಾಂಬೆಯ ಮಣ್ಣಿನ ಕಣವನ್ನು
ಕೈಯಲ್ಲಿ ಹಿಡಿದು ಕಣ್ಣಿಗೊತ್ತಿಕೊಂಡು
ಕುಣಿಯುತ್ತಿವೆ ಭವಿಷ್ಯದ ಬೆಳಕಿನ ಕಿಡಿಗಳು
ಭಾರದ ಕುಡಿಗಳು!
ಮುಂಜಾನೆ ಬರುವ ನೇಸರನ ಕಣ್ಣುಗಳಲ್ಲಿ ಬೆರಗು
ಅರೆ ಇವರಲ್ಲವೇ ನಿನ್ನೆಯವರೆಗೂ ಕೊರಗುತ್ತಾ
ನಾಳಿನ ಉದಯ ನಮಗಾಗಿರಲಿ ಎಂದು ಬೇಡುತ್ತಾ
ನನ್ನನ್ನು ಕಳುಹಿಸಿ ಕೊಡುತ್ತಿದ್ದವರು!
ಎಲ್ಲರ ಕೈಯಲ್ಲೂ ಮೂರು ಬಣ್ಣ
ಎಲ್ಲರೆದೆಯಲ್ಲೂ ಪುಣ್ಯಭೂಮಿಯ ಮಣ್ಣ ಕಣ
ಮುಂದೆ ಅರಳವು ಮೊಗ್ಗುಗಳು
ಸ್ವಾತಂತ್ರದ ಉಸಿರಾಡಲಿ!
#ನಾಡಹಬ್ಬದಶುಭಾಶಯಗಳು

ನೀನೆ ನನಗಾಗ ಆರಂಭ, ಅದೀಗ ಬರೀ ಆಕರ್ಷಣೆ
ಎನ್ನುವ ಅರಿವಾಗಿದೆ,
ಆದರೂ ಸಾಹಿತ್ಯದ ಸುಗ್ಗಿಯಲ್ಲಿ
ಕಲಿತ ಮಗ್ಗಿಯನ್ನು ಮರೆಯುವುದು
ತಪ್ಪಲ್ಲವೆ, ಹಾಗೆ ಈಗ ನನ್ನದೇ ನೆನಪಿನ
ಸಾಗರದಲ್ಲಿ ನಿನಗಾಗಿ ಒಂದು ಹನಿ ಎತ್ತಿಡುವ ಗಳಿಗೆ,
ನಾಸ್ತಿಕನಾದರೂ ಮುಂಜಾನೆಯೆ ಎದ್ದು
ಗುಡಿಗೆ ಹೋಗುವ ನಿನ್ನನ್ನು ಕಾಣಲು
ದೂರದಲ್ಲಿ ನಿಂತು ನಾನೇ ನಿರ್ಮಿಸಿಕೊಂಡ
ಗಡಿಯೊಳಗೆ ಕಾಯುತ್ತಿದ್ದೆ,
ನಿನ್ನೊಂದಿಗೆ ಮಾತಾಡಿ ಬೀಗಲು
ಅಂಗ್ಲವನ್ನು ಅರ್ಧ ಕಲಿತು ಬರುತ್ತಿದ್ದೆ,
ಕಾಗುಣಿತ ತಪ್ಪಿರುವ ಪ್ರಾಸ ತುಂಬಿದ ಪದಗಳನ್ನು
ಪೋಣಿಸಿ ಕವಿತೆಯೆಂದು ಬೆಣ್ಣೆಯಂತಹ ನಿನ್ನ ಅಂಗೈ
ಮೇಲಿಟ್ಟು ನೀ ಓದುವೆ ವೇಳೆ
ನಾ ಕರಗುತ್ತಿದ್ದೆ,
ನೀ ನನಗೊಂದು ಹೊಸ ಜಗತ್ತು ಅಂದು ,
ನಾನೋ ನಿನಗೆ ಹತ್ತರಲ್ಲಿ ಹನ್ನೊಂದು,
ಅಪ್ಪಿತಪ್ಪಿಯೂ ನೀನು
ದಕ್ಕದಿರುವುದೆ ಉತ್ತಮವೆಂದು
ಈಗಷ್ಟೇ ತಿಳಿಯುತ್ತಿದೆ,
ಇಲ್ಲದಿದ್ದರೆ ಆಕರ್ಷಣೆಯನ್ನು
ನಿಜವೆಂದು ಅಗ್ನಿಗೆ ಆಹುತಿಯಾಗುವ ಕೀಟವಾಗುತ್ತಿದ್ದೆ,
ಎಂದಾದರೂ ನಿನ್ನನ್ನು ಮತ್ತೊಮ್ಮೆ
ಎದುರು ಕಂಡರೆ ಎಲ್ಲವನ್ನೂ
ಒಮ್ಮೆ ನೆನದು ಮುಗುಳ್ನಗೆ ಮೂಡಿಸಿ
ಮುಂದೆ ಸರಿಯುತ್ತೇನೆ,
ಇದೆಲ್ಲವನ್ನೂ ಒಂದೂ ತಪ್ಪದೆ
ನನ್ನವಳಿಗೆ ಹೇಳುತ್ತಾ
ನಿನ್ನನ್ನು ಮರೆಯುತ್ತೇನೆ.
ನೀನು ಎಂದಾದರೂ 
ಅಂಗಾತ ಮಲಗಿಕೊಂಡು 
ತಾರೆಗಳನ್ನು ಗುಣಿಸಲು ಯತ್ನಿಸು, 
ಚೆದುರಿ ಹೋದ ನಕ್ಷತ್ರಗಳೆಲ್ಲವೂ 
ತಾ ಮುಂದು ತಾ ಮುಂದು 
ಎಂದು ನಿನ್ನ ಕಣ್ಣುಗಳೆದುರು
ಸಾಲಾಗಿ ನಿಲ್ಲುತ್ತೇವೇನೋ!
ಈ ಮಳೆಯ ಸಂಜೆ
ನೀ ಹಿಡಿದ ಕೊಡೆಯಡಿ 
ನಡೆಯುವಾಗ,
ನಿನ್ನಯ ಕಣ್ಣುಗಳಲ್ಲಿನ
ಮಿಂಚನ್ನು ಕಂಡು, 
ನನ್ನೆದೆಯೊಳಗೆ ಸಿಡಿಲು,
ಬೆಚ್ಚಗೆ ಹಿಡಿದುಕೊಂಡಿದ್ದ
ನಮ್ಮಿಬ್ಬರ ಅಂಗೈಯ ಶಾಖದಿ,
ತುಸು ಕಂಪಿಸಿತು ಒಡಲು
ಕಿವಿಗಂಟಿಕೊಂಡ ಸಂಗೀತ ಸಾಧನ 
ಅದ್ಯಾವುದೋ ಪ್ರೇಮ 
ಗೀತೆಯನ್ನು ಗುನುಗುತ್ತಿದೆ! 
ನಿನ್ನ ಯೋಚನೆಯಲ್ಲಿ ಲಹರಿಯಲ್ಲಿ
ಮುಳುಗಿರುವ ಮನ 
ಸಾಲುಗಳ ನಡುವೆ
ನಿನ್ನಯ ನೆನಪುಗಳನ್ನು ಹುಡುಕುತ್ತಿದೆ!
ನೀ ಆಣೆ ಮಾಡಿ ಹೇಳಿದ ಮಾತುಗಳೆಲ್ಲವೂ
ನನ್ನೆದುರು ಅಣಕ ಮಾಡಿ ನಗುವಾಗಲೂ
ಸಣ್ಣದೊಂದು ಮುನಿಸು
ನಿನ್ನ ಮೇಲೆ ಮೂಡದೇ
ಬದುಕನ್ನು ಶಪಿಸಿ ಶಾಂತವಾಗುವೆ!
ನಿಟ್ಟುಸಿರಿನೊಂದಿಗೆ
ಕೆನ್ನೆಯ ಮೇಲಿನ ಕಂಬನಿಯು
ತುಟಿಯ ಮುಟ್ಟುವ ಮುನ್ನ ಒರಸಿ ನಗುವೇ!
ಕಾಡ್ಗಿಚ್ಚು ನನ್ನೊಳಗೆ ಹೊತ್ತಿಕೊಂಡಿದೆ 
ಆರಿಸುವ ವಿಧಾನವೇ ಆಲಂಗಿಸಿಕೊಳ್ಳುವುದು 
ಎಂದೇನೋ ನಿನಗೂ ತಿಳಿದಿದೆ! 
ಎದುರೆದುರು ಕೂತು ಕಣ್ಣುಗಳಲ್ಲಿ 
ಸಾಣೆ ಹಿಡಿಯುತ್ತಾ. ಮೌನದಿ 
ಮಾತುಗಳನ್ನು ತಿವಿಯುತ್ತಾ
ಇನ್ನೆಷ್ಟು ಹೊತ್ತು ಹೀಗೆ ಕಳೆಯುವುದು,
ಮಧ್ಯಾಹ್ನದ ಸೂರ್ಯ ಸಂಜೆಯ ಪರದೆಯೊಳಗೆ
ಬಚ್ಚಿಟ್ಟುಕೊಳ್ಳುವ ಗಳಿಗೆ ಹತ್ತಿರವಾಯಿತು, ಬಾನಾಡಿಗಳು
ತಮ್ಮ ಗೂಡನ್ನು ಸೇರುವ ಕ್ಷಣ,
ಒಂದು ಮುತ್ತಿಟ್ಟು ನಮ್ಮೀ ಇಂದಿನ
ಭೇಟಿಯನ್ನು ಸವಿಯಾಗಿಸೋಣ!
ದಾರಿಯುದ್ದಕ್ಕೂ ತಲೆಯ ಮೇಲೆ ಹರಡಿಕೊಂಡ
ತಾರೆಯ ಜೊತೆಗೆ ಹಾದಿಯಲ್ಲಿ ಕೈ ಹಿಡಿದು
ನಡೆಯುವಾಗ, ಅಂಗೈಯೊಳಗಿನ
ಬೆಚ್ಚಗಿನ ಕಾವನ್ನು, ಮರು ಭೇಟಿಯವರೆಗೂ
ಕಾಯ್ದಿರಿಸಿಕೊಂಡು ಕಾಯೋಣ!
ತಾಳಿಯ ಬೇಲಿ ಬಿದ್ದೊಡನೆ ಒಂದು ವೃತ್ತದೊಳಗೆ
ಸಿಕ್ಕ ಹುಲ್ಲನ್ನು ಮೆಯ್ಯುವ ಜೋಡಿ ಎತ್ತಿನಂತಹ
ಬದುಕಿಗೂ ಮುನ್ನ ಆಗಸದಿ ಭಾರವಿಲ್ಲದ
ಹಗುರದಿ ಹಾರುವ ಹಕ್ಕಿಯ ಹಕ್ಕನ್ನು
ಆನಂದದಿ ಅನುಭವಿಸೋಣ!
ಹಚ್ಚಿಟ್ಟ ಮೇಣದ ಬತ್ತಿ 
ಪೂರ್ತಿ ಉರಿದು 
ಮುಗಿಯುವ ಮುನ್ನವೇ 
ಅರ್ಧದಲ್ಲಿ ಆರಸಿ 
ಕಿಟಿಕಿಯಿಂದ ಇಣುಕುವ 
ಬೀದಿ ದೀಪದ ಬೆಳಕಿನೊಂದಿಗೆ
ಕೋಣೆಯನ್ನು ಆವರಿಸಿರುವ ಮೌನಕ್ಕೆ
ಮಾತಾಗಿ ಕುಳಿತಿದ್ದೇನೆ!
ನಿದ್ರೆಯು ಕಣ್ಣಿಗೆ ಕಂಬಳಿಯಂತೆ
ಮುಚ್ಚುವವರೆಗೂ ಕೇಳಲು ನಿನ್ನಯ ಮಾತುಗಳಿಲ್ಲ,
ಮುಂಜಾನೆ ಹಣೆಯ ಮೇಲಿನ ನಿನ್ನ ಮುತ್ತಿನೊಂದಿಗೆ
ಇನ್ನು ದಿನಗಳು ಆರಂಭವಾಗುವುದಿಲ್ಲ!
ಸೇತುವೆಯನ್ನು ಹಿಡಿದಿರುವ
ಅತ್ತಿತ್ತಲಿನ ಕಂಬಗಳಂತೆ ನೀನಲ್ಲಿ ನಾನಿಲ್ಲಿ
ನಡುವೆ ಇಬ್ಬರೊಳಗೂ ಇಳಿದು
ಹೋಗುವ ನೆನಪುಗಳ ಹಾವಳಿ!
ಗೋಡೆಯೊಂದಿಗೆ ಮಾತುಗಿಳಿದೇ
ಇರುಳುಗಳು ಮುಗಿಯುತ್ತಿವೆ!
ಕತ್ತಲಿನ ಮೇಲೆ ಬೆಳಕು ಆವರಿಸುವ ಅದ್ಭುತ
ಕ್ಷಣವನ್ನು ಇಬ್ಬನಿಯ ಚಳಿಯಲ್ಲಿ
ಕೊರೆಯುವ ಮಹಡಿಯ ಕಂಬಿಗಳಿಗೆ ಒರಗಿ
ಈ ಬೆಂಗಳೂರಿನ ಬೆರಗನ್ನು ಎಂದು ಸವಿಯುತ್ತೇವೋ
ಒಂದಿಷ್ಟು ಆಸೆಗಳು ಎದೆಯ ಇಣುಕಿನಲ್ಲಿನ್ನೂ
ಅಂಟಿಕೊಂಡಿದೆ, ಕನಸಾಗಿದ್ದ ಹುಡುಗಿಯ ಜಾಗದಲ್ಲೀಗ
ಕಲ್ಪನೆಯಂತಹ
ಹುಡುಗಿಯನ್ನು ಬಯಸುತ್ತಾ...
ನೀನು ಮೆಟ್ಟಿಲ ಮೇಲೆ ಕುಳಿತು 
ಪಕ್ಕದ ಮನೆಯ ಮಕ್ಕಳು 
ಪಟಾಕಿ ಹಚ್ಚುತಿರುವುದನ್ನು 
ಕಂಡು ಸಂಭ್ರಮಿಸುವುದ 
ನೋಡುವ ನಾನು, 
ನಂದಿದ ಹಚ್ಚಿಟ್ಟ ಹಣತೆಯ
ಬದಲಿಗೆ ನಿಮ್ಮಮ್ಮ ನಿನ್ನನ್ನು
ಕೂರಿಸಿದ್ದಾರೇನೋ ಎಂದುಕೊಂಡೆ
ಹೇಯ್ ಹುಡುಗಿ
ನಿನ್ನಯ ಅಂಗೈಯೊಳಗಿನ 
ಕರವಸ್ತ್ರದ ಬದಲಿಗೆ 
ಖಾಲಿ ಕಾಗದವನ್ನು ಇಡಲೇನು,
ಆ ಕೆನ್ನೆಗಳನ್ನು ಒರಸಿಕೊಳ್ಳುವ ವೇಳೆ
ಒಂದೆರೆಡು ಕವನಗಳು ಅಂಟಿಕೊಳ್ಳಲಿ!
ಸುತ್ತಲೂ ನಿನ್ನ
ನೆನಪುಗಳನ್ನು ಚೆಲ್ಲಿಕೊಂಡು 
ಏಕಾಂತವನ್ನು ಕಳೆಯುತ್ತಿದ್ದೇನೆ, 
ಮನದೊಳಗೆ ಬಂದ ನಿನ್ನ ಕುರಿತು
ಒಂದೆರೆಡು ಕವಿತೆ ಬರೆಯುತ್ತೇನೆ,
ಮದುಮಗಳಾದ ಗೆಳತಿಯ
ಅಂಗೈಯಲ್ಲಿ ಮದರಂಗಿ
ಬಿಡಿಸುವಾಗ ನನ್ನ ಹೆಸರು
ಬರೆಯದಿರು, ಕೈತಪ್ಪಿ ಹೋಗುವ
ಇಚ್ಚೆ ನನಗಿಲ್ಲಾ,
ಮುಂಜಾನೆಯ ಲಗ್ನದ ಕ್ಷಣ
ಅವರಿಬ್ಬರೂ ಮಾಲೆ
ಬದಲಾಯಿಸಿಕೊಳ್ಳುವ ವೇಳೆ
ನನ್ನದೇ ನೆನಪಿನಲ್ಲಿ ಅಕ್ಷತೆ
ಎರಚದಿರು ಅವರ ಮೇಲೆ,
ನನಗಿಲ್ಲಿ ಬಿಕ್ಕಳಿಕೆಯಿಂದ
ತಿನ್ನಲಾಗುತ್ತಿಲ್ಲಾ ನನ್ನಯ ಕೈ ಅಡುಗೆ,
ಎಲ್ಲವೂ ಮುಗಿದ ಮರುಕ್ಷಣವೇ
ನನಗೆ ಕರೆ ಮಾಡು,
ಮದುಮಕ್ಕಳು ಅವರಾದರೂ
ಮೆಲ್ಲನೆ ಬೈಕ್ ನಲ್ಲಿ ಮೆರವಣಿಗೆಯಂತೆ
ಬರೋಣ ನಾವಿಬ್ಬರು ...
ನೀನು ಮೌನವಾಗಿ ಹೋದಷ್ಟೂ 
ಸಂಜೆಯ ಸೇತುವೆಯ 
ನೇಸರ ಅವಸರವಾಗಿ ದಾಟುತ್ತಿತ್ತು!
ಕತ್ತಲಿಗೂ ಕಾತುರವಾಗಿದೆ
ಇರುಳು ಮೊದಲು ಆವರಿಸುವುದು 
ನನ್ನ ಮನದೊಳಗೋ, ಜಗದೊಳಗೋ ಎಂದು!
ಕೆನ್ನೆಯ ಮೇಲಿಟ್ಟ ಮುತ್ತಿನ 
ತೇವವು ಇನ್ನೂ ಆರಿಲ್ಲ,
ಅದಾಗಲೇ ನೀ ಹೊರಡಲು ಎದ್ದೆಯಾ?
ಸುತ್ತಲೂ ಚೆಲ್ಲಿದ ಮುಸ್ಸಂಜೆಯ ಕೆಂಪು 
ಇನ್ನೂ ತುಸುವೂ ಮಾಸಿಲ್ಲಾ 
ಆಗಲೇ ಆಯಿತೆ ಸಮಯ?
ಮಾತುಗಳ ನಡುವೆ ಮೌನದ ದಾರವಿದೆ
ನೀ ಹೋದ ಮೇಲೆ ಅದ್ಯಾಕೆ ಎದೆ ಭಾರವಾಗುತ್ತದೆ,
ಇದ್ದು ಹೋಗು ಇನ್ನೂ ಸ್ವಲ್ಪ ಹೊತ್ತು,
ನನ್ನೊಂದಿಗೆ ಮೌನದಿ ಕೂತು,
ನಾನೂ ನಿನ್ನೊಂದಿಗೆ ಅರ್ಧದಾರಿ ಬರುತ್ತೇನೆ,
ನೀನೆ ನನ್ನ ಅರ್ಧಾಂಗಿ ಆದಮೇಲೆ
ನನ್ನಯ ಉಳಿದ ದಾರಿಯನ್ನೂ
ನಿನಗೆ ಕೊಡುತ್ತೇನೆ...
ಕೈ ಹಿಡಿದು ನಡೆಯುವ ವೇಳೆ
ಈ ಭರವಸೆಯನ್ನು
ಮಾತ್ರವೇ ನಾ ಈಗ ಕೊಡಬಲ್ಲೆ,
ನೆನ್ನೆ ಇಂದಿನಂತೆ ಇರುತ್ತದೆಂದು
ತಿಳಿಯಬೇಡ ನಾಳೆ.