Thursday, 31 January 2019

ಮನದಿಂದ ಮನಕೆ ಹರಿದ ಜೀವನದಿಯ ಜಾಡು ಹಿಡಿದು.....
ಮೌನದಲ್ಲೂ ಮಾತು ಹುಡುಕುತ್ತಿದ್ದೇನೆ ಗೆಳೆಯ..
ನಿನ್ನ ಇರವನ್ನು ನನ್ನಲ್ಲಿ ಕಂಡುಕೊಂಡಿದ್ದೇನೆ.....
ಬರುವೆಯೋ ಬಾರೆಯೋ...
ಸಿಗುವೆಯೋ ಸಿಗದಿರುವೆಯೋ...
ಇದರ ಪರಿವೆ ನನಗಿಲ್ಲ....
ಅದರ ಗೊಡವೆಯು ನನಗಿಲ್ಲ.....
ಇದ್ದರು ಇರದ ಎಷ್ಟೋ ಸಂಬಂಧಗಳಿಗಿಂತ
ನಮ್ಮ ಬಂಧ ಮಿಗಿಲು...
ಗೆಳೆಯ.......
ಅಂತರಂಗ ನುಡಿಸೋ ಸುಪ್ತಗೀತೆಯಂತೆ.....
ಅಂತರಾಳದಲ್ಲಿ ಹರಿಯೋ ಮಂದಕಿನಿಯಂತೆ.....
ಮನದ ಗೂಡಲ್ಲಿ ಮಿಡಿಯೋ ಗುಪ್ತಗಾಮಿನಿಯಂತೆ ....
ಕಣ್ಣಿಗೆ ಕಾಣದ....
ಏನನ್ನು ಕೇಳದ.....
ನನ್ನನ್ನೇ ಆವರಿಸಿರುವ...
ನೀನು
ನಿನ್ನ ಇರವು
ನಿರಂತರ...
ಮೀರಿ ನಿಂತಿದೆ ಇಹ ಪರ............
ಒಂದು ಹಳೆಯ ಪುಟ..

Wednesday, 30 January 2019

ಜೀವನ
ಸಾಗರದ ಅಲೆಗಳು...
ಒಂದರ ಹಿಂದೊಂದು..
ಒಂದಕ್ಕೂ ಹೆಸರಿಲ್ಲ..
ಒಂದಕ್ಕೂ ಗುರಿ ಇಲ್ಲ..
ಹಾಗೆ ಬಂದು ಹೀಗೆ ಹೋದ ಅಲೆಗಳು...
ಬರಿಯ ನೀರು .
ಹೆಸರಿಲ್ಲದ ಉಸಿರಿಲ್ಲದ ನೀರು...
ಬದುಕಿನ ಹೊತ್ತಿಗೆಯಲ್ಲಿ
ನೂರಾರು ಪುಟಗಳು..
ಹೀಗೆ ಬಂದು ಹಾಗೆ ಹೋದ ಖಾಲಿ ಪುಟಗಳು..
ಕೆಲವಕ್ಕೆ ಬಣ್ಣವಿಲ್ಲ...
ಹಲವಕ್ಕೆ ಪದಗಳಿಲ್ಲ....
ಬರಿಯ ಅಕ್ಷರಗಳು.....
ಅರ್ಥವಿಲ್ಲದ ವ್ಯರ್ಥ ಅಕ್ಷರಗಳು...
ಬಾಳ ಬನದಲ್ಲಿ
ನೂರಾರು ಮರಗಳು..
ಹುಟ್ಟಿ ಮುರುಟಿ ಹೋಗೊ ಸಂಬಂಧಗಳು...
ಕೆಲವಕ್ಕೆ ಒಲವಿಲ್ಲ....
ಉಳಿದವಕ್ಕೆ ಬಲವಿಲ್ಲ..
ಬರಿಯ ಬಂಧಗಳು..
ಬೇಡದ ಬಂಧನಗಳು...
ನೀರಲ್ಲೂ ಜೇನ...
ಅಕ್ಷರದಲ್ಲೂ ಹಾಡ..
ಬಂಧನದಲ್ಲೂ ಅನುಬಂಧ
ಹುಡುಕೋದೆ ಜೀವನ....
ಇದು ಬರಿ ಉಸಿರಲ್ಲ ಗೆಳೆಯ...
ಇದು ಜೀವಾಮೃತ...
ಇದನರಿಯದಿದ್ದರೆ...
ಜೀವನ ಅನೃಥ ..
ಕಡಲಿಗೂ ನಿನ್ನ ನೆನಪಿಗೂ
ಎನಿತೀ ಅವಿನಾಭಾವ ಸ್ನೇಹವೋ ಗೆಳೆಯ...
ಕಡಲ ತಟದಲ್ಲಿ, ಮರಳ ಮಡಿಲಲ್ಲಿ
ಪುಟ್ಟ ಕಪ್ಪೆ ಚಿಪ್ಪುಗಳ ಉಡಿಯೊಳಗೆ ಇರುಕಿ ನಡೆವಾಗ
ಶರಧಿಯ ಅಲೆಗಳು ಪಾದಕ್ಕೆ ಸೋಕಿದಾಗ
ಅದೇಕೋ ನಿನ ನೆನಪೇ ಅಬ್ಬರಿಸುತ್ತದೆ ಗೆಳೆಯ...
ಮಳೆಗೂ ನಿನ್ನ ಉಸಿರಿಗೂ
ಎನಿತು ಬಂಧವೋ ಗೆಳೆಯ...
ತುಂತುರು ಹನಿಯಾಗಲಿ, ಬಿರು ಮಳೆಯಾಗಲಿ..
ಹನಿ ನೊಸಲ ಸೋಕಿ, ಕದಪ ಚುಂಬಿಸಿದರೊಮ್ಮೆ..
ತಣ್ಣನೆಯ ಹನಿ ಹನಿಯಲ್ಲೂ ತಾಕುವುದು..
ನಿನ್ನ ಉಸಿರ ಬಿಸಿ ಸ್ಪರ್ಶ ..
ಕಡಲ ಅಲೆಯು
ಮಳೆಯ ಹನಿಯು
ನಮ್ಮೊಲುಮೆಯ ಸಹಿಗಳು ....
ಇರವು, ನೋಟ, ಸ್ಪರ್ಶ ಇನಿತು ಬೇಡೆಮಗೆ
ಒಲವಿದೆ ಎಂದು ತಿಳಿಸಲು.....))
ನಿನ್ನೊಡಲ ನೋಡುತ್ತಾ
ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..
ನಿನ್ನಂತೆ ನಾನೋ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...
ನಿನ್ನೊಳಗೆ ನನ್ನ ನೋಡಿದಾಗ...
ನಾನು ನೀನು ಬೇರೆಯಲ್ಲ ಅನಿಸಿದ್ದೇಕೆ...
ನಿನ್ನ ಕಲರವ
ನನ್ನದೇ ನಗು ಅನಿಸಿದ್ದೇಕೆ...
ನಡುವೆಲ್ಲೋ ನಿನ್ನ ಮೌನ
ನನ್ನೊಳಗಿನ ಸುಪ್ತ ಗಾನ ಅನಿಸಿದ್ದೇಕೆ...
ಅಲ್ಲೆಲೋ ನೀನು ಧುಮ್ಮಿಕ್ಕುವಾಗ
ನನ್ನೊಳಗಿನ ಭಾವನೆಗಳ ಮಹಾಪೂರ ಅನಿಸಿದ್ದೇಕೆ ..
ನೀನು ಕಡಲಿನೊಡನೆ ಬೆರೆಯಲು ಸರಸರನೆ ಹರಿವಾಗ...
ನಲ್ಲನೆಡೆಗಿನ ನನ್ನ ನಡೆಯು ನೆನಪಾದುದ್ದೇಕೆ...
ಶರಧಿಯೊಡಲ ಸೇರಿದೊಡನೆ ನಿನ್ನ ನೀನು ಮರೆತಾಗ
ನನ್ನ ಅವನ ಮಿಲನ ನೆನೆದು ಕೆಂಪಾದುದ್ದೇಕೆ ..
ಅರಿಯದೆ ಹೋಗುತ್ತಿದ್ದೇನೆ ಕಾವೇರಿ...
ನಿನ್ನೊಡಲ ನೋಡುತ್ತಾ
ನನ್ನನೇ ನಾನು ತೆರೆದುಕೊಳ್ಳುತ್ತಾ...
ನನ್ನಂತೆ ನೀನೋ ..
ನಿನ್ನಂತೆ ನಾನೋ..
ಎನಿಸುವಾಗ.....
ನನ್ನ ಕೊಡುಕೊಳ್ಳುವಿಕೆಯ ಪರಿ..
ನಿನ್ನ
ಏನು ಬಯಸದೆ ಪ್ರೀತಿ ಹರಿಸುವ ಪರಿ
ಮನದಲೆಲ್ಲೋ ಮಿಂಚಿನಂತೆ ಹೊಳೆದು...
ನೀನೆಲ್ಲಿ...ನಾನೆಲ್ಲಿ
ಅನಿಸಿದ್ದು ಸುಳ್ಳಲ್ಲ ಕಾವೇರಿ...))
ಮೊನ್ನೆ ತಲಕಾಡಿನ ಕಾವೇರಿಯ ತಟದಲ್ಲಿ ಅವಳೊಡನೆ ನಡೆದ ನನ್ನ ಮೌನ ಸಂಭಾಷಣೆ...
ನಿನಗಾಗಿ ಕಾಯುವ ನನ್ನ ಹೆಗಲ ಮೇಲೆ ..
ಮತ್ತೊಂದು ಹಗಲು ಇನ್ನೊಂದು ಇರುಳು 
ಕಳೆದು ಹೋಗಿದೆ ಗೆಳೆಯ
ವರುಷಗಳೇ ಉರುಳಿದರು ಈ ಕಾಯುವಿಕೆ ಬದಲಾಗದು 
ನೀನು ಬರಲಾರೆಯೆಂದು ನನಗೆ ತಿಳಿದಿದ್ದರೂ......
ನಾನು ಕಾಯುತ್ತಿರುವೆ ಎಂದು ನಿನಗೆ ಅರಿವಿದ್ದರೂ...
ನಮಗಿಬ್ಬರಿಗೂ ಗೊತ್ತು....
ಅದು ಕಾಯುವಿಕೆಯಲ್ಲ..
ವಿರಹವಲ್ಲ...
ಮೋಹವಲ್ಲ.....
ಅದು ಪ್ರೀತಿ ಪ್ರೇಮಕ್ಕು ಮೀರಿದ 
ಸುಂದರ ಅನುಬಂಧ ಎಂದು
ಅದಕ್ಕೆ ಬಂಧವಿಲ್ಲ...
ಮುಪ್ಪಿಲ್ಲ......
ಆದರೂ ನಾನು ಕಾಯುವೆ ಗೆಳೆಯ
ಸಾವಿನಾಚೆಯ ಬದುಕಿನ ಮಿಲನಕ್ಕಾಗಿ..
ಮೌನವಾಗಿ.....
ಒಂದು ಸಣ್ಣ ನೋವ ಹನಿ ಮನದ ಕಡಲ ಒಳಗೆ ಸೇರಿ
ನೋವ ಕೊಟ್ಟಿತು...
ನೊಂದ ಮನಸು ತಾನೇ ತನ್ನ ವಿಧಿಯ ಹಳಿದಿತ್ತು..
ಅಲ್ಲೇ ಇದ್ದ ಕಪ್ಪೆ ಚಿಪ್ಪು ನನ್ನ ನೋಡಿತು..
ನೋಡಿ ಪಿಸುನುಡಿಯಿತು...
ಅಯ್ಯೋ ಮರುಳೆ , ಇಲ್ಲಿ ಕೇಳು ನನ್ನ ಕಥೆಯನು ..
ನನ್ನ ಒಡಲ ಸೇರೋ ಹನಿಯು ಕೊಡುವ ನೋವನ್ನು...
ಹನಿಯು ಬಿದ್ದ ಒಡನೆ ನಾನು ಪಡುವ ಪಾಡನು ...
ನೋವು ಎಂದು ನಾನು ವಿಧಿಯನೆಂದು ಹಳಿಯೇನು...
ಬಿದ್ದ ಹನಿಯ ಒಡಲ ಒಳಗೆ ಮುತ್ತಾಗಿಸುವೆನು....!!!!
ನಿನ್ನ ನೋವ ನಿನ್ನ ಒಳಗೆ ನೀನು ಬದಲಿಸು...
ನೋವೆ ಹೆದರಿ ಮುತ್ತು ಆಗೋವರೆಗೆ ಅರಳಿಸು.. !!!
ಅರಿತೆ ನಾನು ನೋವಿನಲ್ಲೂ ಮುತ್ತು ಬೆಳೆಯೋ ಆಟವ...
ಬದುಕ ಬನದ ಸಾರ್ಥಕತೆಯ ನಿನ್ನ ಪಾಠವ .

ಮುದ್ದು ಮುಖದ ಅರಳಿದ ನಗುವಿನ ಸೊಬಗಿ ನನ್ನ ಗೆಳತಿ..
ನಗುವಿನ ಚಿಲುಮೆ......ಒಲುಮೆಯ ಜಲಪಾತ.
ಅಬ್ಬಬ್ಬ ...ಎಂದು ಮತ್ಸರ ಪಡುವಷ್ಟು ಪ್ರೀತಿಯ ಹರಿಸುವ ಮಹಾನದಿ...
ಆದರೆ .....
ಆ ಸುಂದರ ಕಣ್ಣುಗಳ ಹಿಂದೆ ನೋವು ಅಡಗಿದೆ...
ಆ ನಗುವಿನ ಹಿಂದೆ ಏಕಾಂಗಿ ಹೃದಯದ ಹಾಡಿದೆ..
ಆ ಪ್ರೀತಿಯ ಒರತೆಯ ಹಿಂದೆ ಭರಿಸಲಾರದಷ್ಟು ಪ್ರೀತಿಯ ಕೊರತೆ ಇದೆ....
ಅಂದಿನ ಮಾಸದ ಗಾಯದ ಗುರುತಿದೆ...
ಎಲ್ಲರ ನಡುವೆ ಇದ್ದಾಗ ..
ಅಳಿಸಲಾರದ ನಗೆಯ ಚೆಲುವೆ ,
ಯಾರು ಇಲ್ಲದಿರುವಾಗ.....
ಕಣ್ಣಿರ ಕಡಲಾಗುತ್ತಾಳೆ......
ಮೌನದ ಮಡುವಾಗುತ್ತಾಳೆ....


ಆದರೂ....
ಆ ನೋವಿಗೆ ಕಾರಣ ಯಾರೇ ಆದರೂ..ಏನೇ ಆದರು....
ಕ್ಷಮಿಸೆಂದು ಕೇಳದಿದ್ದರೂ ಕ್ಷಮಿಸುತ್ತ...
ಮತ್ತೆ ನಗುತ್ತಲೇ ಮುನ್ನಡೆಯುತ್ತಿದ್ದಾಳೆ...
ಹೆಜ್ಜೆ ಹೆಜ್ಜೆಗೂ ನಗೆಯ ಮುತ್ತು ಸುರಿಸುತ್ತ...
ಬೆಳಕಿನ ಕಿರಣದ ಜಾಡು ಹಿಡಿದು...
ಇಂದಲ್ಲ ನಾಳೆ....
ನಾಳೆಯಲ್ಲದಿದ್ದರೆ ಮತ್ತೊಂದು ದಿನ...
ಎಂಬ ಆಸೆಯ ಮೂಟೆಯ ಹೊತ್ತು...
ತನ್ನ ನಂಬಿದವರಿಗಾಗೀ.
ಧೃಡವಾಗಿ....
ನಗೆಯ ಚಿಲುಮೆಯಾಗಿ...